ಮಣಿ ಅಯ್ಯರ್, ಫಾಲ್ಘಾಟ್ ಟಿ ಎಸ್
	1918-81. ಮೃದಂಗವನ್ನು ಸಹಾಯಕ ತಾಳ ವಾದ್ಯವೆಂಬ ದ್ವಿತೀಯಕ ಅಂತಸ್ತಿನಿಂದ ಪೋಷಕ ಸಂಗೀತ ವಾದ್ಯವೆಂಬ ಪ್ರಾಥಮಿಕ ಅಂತಸ್ತಿಗೆ ಎತ್ತರಿಸಿದ ಯುಗ ಪ್ರವರ್ತಕ ಪ್ರತಿಭಾನ್ವಿತ ಮೃದಂಗವಿದೆ. ಮೃದಂಗವಾದನದಲ್ಲಿ ಎರಡು ಶೈಲಿಗಳಿವೆ: ಹಾಡಿನ ತಾಳ ಅನುಸರಿಸಿ ನುಡಿಸುವುದು. ಹಾಡಿನ ಸಾಹಿತ್ಯ ಅನುಸರಿಸಿ ನುಡಿಸುವುದು. ಮೊದಲನೆಯದು ಹೆಚ್ಚು ಕಡಿಮೆ ಯಾಂತ್ರಿಕ. ಎರಡನೆಯದಾದರೋ ಸೃಜನಶೀಲ. ಮಣಿ ಅಯ್ಯರ್ ರಂಗಪ್ರವೇಶಿಸುವ ತನಕ ಯಾಂತ್ರಿಕ ಶೈಲಿಯೇ ರೂಢಿ ಆಗಿತ್ತು. ಇವರು ಸೃಜನಶೀಲ ಶೈಲಿಯನ್ನು ಪ್ರವರ್ತಿಸಿ ಮೃದಂಗವನ್ನು ಯಾವುದೇ ಸಂಗೀತವಾದ್ಯಕ್ಕೆ ಸಮಭುಜವಾಗುವಂತೆ ದ್ರವ್ಯಾಂತರಿಸಿದರು. ತಮ್ಮ ವಾದಕ್ಕೆ ಚಂಡೆಯ ವರಿಸೆಗಳನ್ನು ಅನುಕೂಲಕರವಾಗಿ ಹೊಂದಿಸಿ ಮೃದಂಗಕ್ಕೆ ಹೊಸ ಆಯಾಮ ನೀಡಿದರು ಮತ್ತು ಅದರ ಸಾಧ್ಯತೆಗಳನ್ನು ವ್ಯಾಪಕವಾಗಿ ವಿಸ್ತರಿಸಿದರು.

	ಪಾಲ್ಘಾಟಿನಲ್ಲಿ ಜನನ. ತಂದೆ ತಿರುವಿಳ್ವಾಮಲೈ ಆರ್. ಶೇಷಭಾಗವತರು. ಹರಿಕಥಾ ವಿದ್ವಾಂಸರು. ತಾಯಿ ಆನಂದಾಂಬಾಳ್. ಮನೆಯಲ್ಲಿ ಸಂಗೀತ, ಹೊರಗೆ ಚಂಡೆನಾದ. ಎಳೆ ಹುಡುಗ ಮಣಿಯ ಒಲವು ಅನದ್ಧ ವಾದ್ಯದತ್ತ ಹೊರಳಿದಾಗ ಒಂಬತ್ತನೆ ವಯಸ್ಸಿನಲ್ಲಿ ಇವನ್ನು ಮೃದಂಗದ ಪ್ರಾರಂಭಿಕ ಶಿಕ್ಷಣಕ್ಕೆ ಶೌತ್ತ ಪುರಮ್ ಸುಬ್ಬಯ್ಯರ್ ಮತ್ತು ವಿಶ್ವನಾಥ ಅಯ್ಯರ್ ಅವರಲ್ಲಿಗೆ ಕಳಿಸಲಾಯಿತು. ತಂಜಾವೂರು ವೈದ್ಯನಾಥ ಅಯ್ಯರ್ ಅವರಿಂದ ಪ್ರೌಢ ಶಿಕ್ಷಣ ದೊರೆಯಿತು. ಈ ವೇಳೆಗೆ ಮಣಿ ತಂದೆ ಜೊತೆ ಹರಿಕಥೆಗೆ ಮೃದಂಗ ನುಡಿಸುತ್ತಿದ್ದ.

	ಈ ಬಾಲಪ್ರತಿಭೆಯನ್ನು ಬೆಳಕಿಗೆ ತಂದ ಕೀರ್ತಿ ಆಗ ತಮ್ಮ ಕೀರ್ತಿಯ ಉಚ್ಛ್ರಾಯ ಸ್ಥಿತಿಗೆ ಏರಿ ಚೆಂಬೈ ವೈದ್ಯನಾಥ ಭಾಗವತರಿಗೆ ಸಲ್ಲುತ್ತದೆ. ಕಂಚು ಕಂಠದ ಮಾಂತ್ರಿಕ ಚೆಂಬೈ ಹತ್ತರ ಹರೆಯದ ಹುಡುಗನನ್ನು ಮೃದಂಗ ಸಾಥೀಯಾಗಿ ಕೂರಿಸಿಕೊಂಡು ಹುರಿದುಂಬಿಸಿ ಈತನ ಪ್ರತಿಭೆ ಪ್ರಕಟವಾಗಲು ಸರ್ವ ಅವಕಾಶಗಳನ್ನೂ ಒದಗಿಸಿದರು. ಹೀಗೆ ಆರಂಭವಾದ ಮಣಿಯವರ ವೃತ್ತಿ ಜೀವನ ಅವರ ಕೊನೆಯ ಉಸಿರಿನ ತನಕವೂ ಊಧ್ರ್ವಗಾಮಿಯಾಗಿಯೇ ಇತ್ತು. ನವನವೋನ್ಮೇಷಶಾಲಿಯಾಗಿ ಮೃದಂಗದ ಎತ್ತರ ಬಿತ್ತರಗಳನ್ನು ಅಲ್ಲಿಯ ತನಕ ಯಾರೂ ಕಂಡು ಅಥವಾ ಕೇಳಿ ಅರಿಯದ ಮಟ್ಟಕ್ಕೆ ಒಯ್ದಿತ್ತು. ರಸಿಕ ವಿಮರ್ಶಕರ ದೃಷ್ಟಿಯಿಂದ ಮಣಿ-ಮೃದಂಗ ಪರ್ಯಾಯ ಪದಗಳಾಗಿದ್ದುವು.

	ಕಲಾವಿದರು ಮಣಿ ಅವರೊಡನೆ ಕುಳಿತು ಕಛೇರಿ ನಡೆಸುವುದು ಒಂದು ಹಿರಿಮೆ ಎಂಬ ಭಾವನೆ ಮೂಡುವ ಮಟ್ಟಿಗೆ ಇವರ ವಾದನದ ಶ್ರೇಷ್ಠತೆ ಪಸರಿಸಿತ್ತು. ದಕ್ಷಿಣಾಮೂರ್ತಿ ಪಿಳ್ಳೆಯಂಥ ಲಯಸಿಂಹದ ಪರೀಕ್ಷೆಗೆ ಒಳಪಟ್ಟು ಮಣಿ ಜಯಶಾಲಿಯಾಗಿ ಅವರಿಂದಲೇ ಆಶೀರ್ವಾದ ಪಡೆದರು. ಇವರಿಗೆ ಸಂದಿರುವ ಬಿರುದುಗಳು ಪ್ರಶಸ್ತಿಗಳು ಅನೇಕ. 1956ರಲ್ಲಿ ರಾಷ್ಟ್ರಪತಿಯವರಿಂದ ಪದ್ಮಭೂಷಣ ಪ್ರಶಸ್ತಿ ಪಡೆದರು. 1965ರಲ್ಲಿ ಲಂಡನ್ ಹಾಗೂ ಏಡಿನ್‍ಬರೋ ಕಾಮನ್ವೆಲ್ತ್ ಸಂಗೀತೋತ್ಸವದಲ್ಲಿ ಭಾಗವಹಿಸಿದರು.

	ಮದ್ರಾಸ್ ಮ್ಯೂಸಿಕ್ ಅಕಾಡೆಮಿಯ ವಾರ್ಷಿಕಾಧಿವೇಶನದ ಅಧ್ಯಕ್ಷರಾಗಿ (1967) ಸಂಗೀತ ಕಲಾನಿಧಿ ಬಿರುದು ಪಡೆದ ಏಕೈಕ ಲಯ ವಿದ್ವಾಂಸರಿವರು.

	ಮಣಿ ಅಯ್ಯರ್ ಅವರು ಮೊತ್ತಮೊದಲು ಶ್ರೇಷ್ಠ ಸಂಗೀತ ಕಲಾವಿದರು ಅನಂತರ ಮೃದಂಗವಾದಕರು ಎನ್ನುವುದು ಸರಿಯಾದ ವಿವರಣೆ. ಕೃತಿಯ ಭಾವಕ್ಕೆ ಧಕ್ಕೆ ಬಾರದಂತೆ ಅದಕ್ಕೆ ಪೋಷಕವಾಗಿ, ಅದರ ಸೊಬಗನ್ನು ಇಮ್ಮಡಿಗೊಳಿಸುತ್ತ ಪ್ರಕಾಶಿಸುತ್ತಿತ್ತು. ಇವರ ನಾದವೈಖರಿ. ಪಕ್ಕವಾದ್ಯ ನುಡಿಸುವಾಗ ಎಂದೂ ತಮ್ಮ ಎಲ್ಲೆಯನ್ನು ಮೀರಿದುದು ಇಲ್ಲ. ಅಂತೆಯೇ ತನಿ ನುಡಿಸುವಾಗ ಎಂದೂ ಹದ ತಪ್ಪಿದುದಿಲ್ಲ. ಶಾರೀರ ಪುಷ್ಟಿಗೆ ಮತ್ತು ನಾದ ಸಹಜತೆಗೆ ಆತಂಕಕಾರಿ ಆಗಬಹುದೆಂಬ ದೃಷ್ಟಿಯಿಂದ ಧ್ವನಿವರ್ಧಕದ ಬಳಕೆಯನ್ನು ಪ್ರೋತ್ಸಾಹಿಸಿದ ಇವರು ಸಹಕಲಾವಿದರನೇಕರ ಆಕ್ಷೇಪಣೆಗೆ ಗುರಿಯಾದರು. ಅದೇ ವೇಳೆ ಹಿರಿಯ ಕಿರಿಯ ಕಲಾವಿದರನೇಕರ ಅಪಾರ ಗೌರವ ವಿಶ್ವಾಸ ಮೆಚ್ಚುಗೆಗೆ ಇವರು ಪಾತ್ರರಾಗಿದ್ದರೆಂಬುದೂ ಅಷ್ಟೇ ನಿಜ. ಒಮ್ಮೆ ಟೈಗರ್ ವರದಾಚಾರ್ಯರು ಮಣಿ ಅಯ್ಯರಿಗೆ ಸಾಮಾನ್ಯವಾಗಿ ಎರಡು ಹಸ್ತಗಳಿಂದ ಕೇವಲ ಹತ್ತೇ ಬೆರಳಿರುವುದು. ಆದರೆ ಮೃದಂಗ ನುಡಿಸುವಾಗ ಐವತ್ತು ಬೆರಳುಗಳಿರುವಂತೆ ಭಾಸವಾಗುತ್ತದೆ; ಬಾಲವಿದ್ದಿದ್ದಲ್ಲಿ ಸಾಕ್ಷಾತ್ ನಂದೀಕೇಶ್ವರರಾಗುತ್ತಿದ್ದರು ಎಂದು ಮೆಚ್ಚಿ ನುಡಿದಿದ್ದಾರೆ.

	ಗಾಂಭೀರ್ಯವೇ ಮೂರ್ತಿವೆತ್ತ ಮಿತಭಾಷಿಯಾದ ವ್ಯಕ್ತಿ ಮಣಿ ಅಯ್ಯರ್. ಹೆಚ್ಚಿನ ವಿದ್ಯಾಭ್ಯಾಸ ಇರಲಿಲ್ಲವಾದರೂ ಕಲೆ ಹಾಗೂ ಜೀವನ ರಂಗಗಳಲ್ಲಿ ಶ್ರೇಷ್ಠ ಜ್ಞಾನ ಪಡೆದ ಜ್ಞಾನವೃದ್ಧ. ಅವರು ಏನೆ ನುಡಿದರೂ ನುಡಿಸಿದರೂ ಅದು ಅವರ ಅನುಭವದ ಮೂಸೆಯಿಂದ ಬಂದ ಪಕ್ವವಾಣಿಯೇ ಆಗಿರುತ್ತಿತ್ತು. ಕಲೆ ದೈವಿಕವಾದುದು, ಅದನ್ನು ಕಲಿಯುವವರು ಅದಕ್ಕಾಗಿ ಹುಟ್ಟಿರಬೇಕು. ಗುರುವಿನ ಯುಕ್ತ ಮಾರ್ಗದರ್ಶನ, ಕಲೆ ಹಾಗೂ ಗುರುವಿನಲ್ಲಿ ಕಲಾವಿದ ಇಡುವ ಅನನ್ಯ ಭಕ್ತಿ, ಶ್ರದ್ಧೆ ಸತತಾಭ್ಯಾಸ, ಏಕಾಗ್ರತೆಗಳು ಕಲಾವಿದನನ್ನು ಮೇಲ್ಮಟ್ಟಕ್ಕೆ ಒಯ್ಯಬಲ್ಲ ಸಾಧಕಗಳು ಎಂಬುದು ಮಣಿ ಅಯ್ಯರರ ಅಭಿಪ್ರಾಯ.

	ಮೃದಂಗವಾದನದಲ್ಲಿ ಇವರು ಅನೇಕ ಹೊಸ ತಂತ್ರಗಳನ್ನು ಬಳಕೆಗೆ ತಂದರು. ತಂಜಾವೂರು ಶೈಲಿ ಹಾಗೂ ಕೇರಳದ ಚಂಡೆಯ ಅನೇಕ ಗುಣಗಳನ್ನು ಮೈಗೂಡಿಸಿಕೊಂಡು ಮೃದಂಗದಲ್ಲಿ ಅನೇಕ ಸುಂದರ ವಿನ್ಯಾಸಗಳನ್ನು ಮೂಡಿಸಿದ ಲಯಶಿಲ್ಪಿ ಇವರು. ಇವರ ವಾದನದ ವೈಶಿಷ್ಟ್ಯವೆಂದರೆ ಅವರು ಉಪಯೋಗಿಸುತ್ತಿದ್ದ ವಾದ್ಯದ ಮೀಟು ಮತ್ತು ಛಾಪುಗಳ ಪರಿಶುದ್ಧತೆ. ಎಷ್ಟೋ ಬಾರಿ ವೇದಿಕೆಯ ಮೇಲೆ ಕರಣೆ ಕೆರೆದು, ಕಲ್ಲಿನಲ್ಲಿ ಉಜ್ಜಿ. ಮುಖ್ಯ ಕಲಾವಿದರು ಹೇಳಿಕೊಳ್ಳಲಾಗದ ಅಸಮಾಧಾನಕ್ಕೆ ತುತ್ತಾದುದುಂಟು. ಇದಕ್ಕಾಗಿ ಇವರು ಪ್ರತಿ ಬಾರಿಯೂ ವಾದ್ಯಗಳನ್ನು ತಯಾರಿಸಿಕೊಳ್ಳುತ್ತಿದ್ದರು. ಬಲಗೈ ಮೀಟಿನ ಕೆಳಗೆ ಕಡ್ಡಿಯನ್ನು ಇಡುವ ಅಭ್ಯಾಸ ಇವರಿಗೆ ಸೇರದು. ವಾದ್ಯದಲ್ಲಿ ಝ್ಯೋಂ ಎಂಬ ದೀರ್ಘನಾದದ ಬದಲು ಠಣ್ ಎಂಬ ಹ್ರಸ್ವನಾದದ ಬಳಕೆ ಇವರಿಗೆ ಹೆಚ್ಚು ಪ್ರಿಯ. ನುಡಿಕೆಯಲ್ಲಿ ಪಾಠಾಕ್ಷರಗಳು ಖಚಿತ ನಾದದೊಂದಿಗೆ ಹೊರಹೊಮ್ಮುತ್ತಿದ್ದುವು.

	ಚಿಕ್ಕ ವಯಸ್ಸಿನಲ್ಲೇ (ಸುಮಾರು 10 ವರ್ಷದೊಳಗೆ) ಕಲೆಯ ಅಭ್ಯಾಸ ಪ್ರಾರಂಭಿಸುವುದು ಯೋಗ್ಯ. ಯಾವುದೇ ಚಿಕ್ಕ ಭಾಗವಾದರೂ ಹತ್ತಾರು ಬಾರಿ ನುಡಿಸಿ, ಪಳಗಿಸಿಕೊಂಡ ಬಳಿಕವೇ ಹೊಸ ಭಾಗವನ್ನು ತೆಗೆದುಕೊಳ್ಳಬೇಕು. ಹಾಡುಗಾರಿಕೆಯನ್ನು ಎಲ್ಲ ಪಕ್ಕವಾದ್ಯವಾದರೂ ಅವಶ್ಯಕವಾಗಿ ತಿಳಿದಿರಲೇಬೇಕು. ಕೃತಿಯ ಭಾವವನ್ನು ಅರಿತು ಅದಕ್ಕೆ ಪೋಷಕನಾಗಿ ವಾದ್ಯವನ್ನು ನುಡಿಸಿ ಸಾಮಾನ್ಯರಿಂದ ಹಿಡಿದು ಜ್ಞಾನವೃದ್ಧರವರೆಗೆ ಎಲ್ಲ ವರ್ಗದವರನ್ನೂ ವಾದನ ಮಾಧುರ್ಯದಿಂದ ಪರವಶಗೊಳಿಸಬೇಕು. ಲಯ ವಾದ್ಯದವರು ಐದು ಹತ್ತು ಮಿನಿಟುಗಳ ಒಳಗೆ ತಮ್ಮ ಸಾಮಥ್ರ್ಯದಿಂದ ರಸದೌತಣ ನೀಡಬಲ್ಲ ಶಕ್ತಿಶಾಲಿಯಾಗಬೇಕು. ನಾವು ಬೇರೆಯವರಲ್ಲಿ ಏನು ತಪ್ಪುಗಳನ್ನು ಕಾಣುವೆವೋ ಅವು ನಮ್ಮ ಸಂಗೀತದಲ್ಲಿ ಬಾರದಂತೆ ಎಚ್ಚರ ವಹಿಸಬೇಕು ಎಂಬುದಾಗಿ ಮಣಿಯವರು ಕಿರಿಯರಿಗೆ ಹಿತೋಕ್ತಿ ನೀಡಿದ್ದಾರೆ.

	1981 ಮೇ 31ರಂದು ಮಣಿ ಅಯ್ಯರ್ ನಿಧನರಾದರು. ಅವರ ಅಪಾರ ಕಲಾ ಸೇವೆಯ ಚಿರಸ್ಮರಣೆಗಾಗಿ ಬೆಂಗಳೂರಿನಲ್ಲಿ ಪಾಲ್ಘಾಟ್ ಮಣಿ ಅಯ್ಯರ್ ಸ್ಮಾರಕ ಕಲಾಕೇಂದ್ರ ಸ್ಥಾಪಿತವಾಗಿದೆ. ಮಣಿ ಅಯ್ಯರ್ ಸ್ಮಾರಕೋಪನ್ಯಾಸಗಳು, ಲಯ-ತಾಳಗಳ ಬಗ್ಗೆ ವಿಚಾರಗೋಷ್ಠಿಗಳು, ಪ್ರಶಸ್ತಿಗಳ ವಿತರಣೆ, ಸಂಗೀತಕಾರ್ಯಕ್ರಮಗಳು, ಅಧ್ಯಯನ ಗೋಷ್ಠಿಗಳು ಮುಂತಾದ ವೈವಿಧ್ಯಮಯ ಕೊಡುಗೆಗಳ ಮೂಲಕ ಮಣಿ ಅಯ್ಯರ್ ಸ್ಮಾರಕ ನಿರಂತರವಾಗಿ ಸಾಗುತ್ತಿದೆ.					
(ಬಿ.ಕೆ.ವಿ.ಇ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ